ದೇವರ ಸರ್ಪ

0 Comments

.areyuru007.jpg

ಇದೇ ದೇವಾಲಯದ ಜಾಗದಲ್ಲಿ ಒಂದು ದೈವಸರ್ಪ ವಾಸಿಸುತ್ತಿದ್ದು ಅದು ಶ್ರೀ ಕ್ಷೇತ್ರವನ್ನು ಕಾಯುತ್ತಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಸರ್ಪವು ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಾತ್ರಿ ವೇಳೆಯಲ್ಲಿ ಕೆರೆಯ ನೀರಿನ ಮೇಲೆ ಈಜಾಡಿಕೊಂಡು ಬಂದು ಸ್ವಲ್ಪ ಕಾಲ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದ್ದು ಹೋಗುತ್ತದೆ. ಹೀಗೆ ಬರುವುದನ್ನು ಅರೆಯೂರಿನ ಅನೇಕ ಜನ ನೋಡಿರುತ್ತಾರೆ. ಒಮ್ಮೊಮ್ಮೆ ಅದು ಜ್ಯೋತಿರ್ಲಿಂಗುವಿನ ಸುತ್ತಲೂ ಸುತ್ತಿಕೊಂಡು ಹೆಡೆ ಬಿಚ್ಚಿ ದೊಡ್ಡದಾಗಿ ಕಾಣುತ್ತಿರುತ್ತದಂತೆ. ಮಿಕ್ಕ ಸಮಯದಲ್ಲಿ ಈ ಸರ್ಪವು ಸಾಮಾನ್ಯ ಸಣ್ಣ ಹಾವಿನಂತೆ ಕಾಣುತ್ತದೆಯಂತೆ.

ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಪೂಜೆ ಮಾಡುವ ಅರ್ಚಕರು ದೇವಾಲಯಕ್ಕೆ ಬರುವಾಗ ಅವರಿಗೇ ಗೊತ್ತಿಲ್ಲದೆ ಏನಾದರೂ ಅಂಟು ಮುಟ್ಟು ಮೈಲಿಗೆ ಉಂಟಾದರೇ ಈ ಸರ್ಪವು ಅವರಿಗೆ ಗೋಚರಿಸಿ ದೇವಸ್ಥಾನದ ಬಾಗಿಲು ತೆಗೆಯದಂತೆ ದೇವಸ್ಥಾನದ ಒಳಗಡೆಯಿಂದ ಸರ್ಪವು ಬಾಗಿಲಿಗೆ ಅಡ್ಡಲಾಗಿ ಮಲಗಿರುತ್ತದೆ. ಇದು ಅರ್ಚಕರಿಗೆ ಸರ್ಪವು ಕೊಡುವ ಎಚ್ಚರಿಕೆ. ಆಗ ಅರ್ಚಕರು ಮತ್ತೆ ಸ್ನಾನ ಮಾಡಿಕೊಂಡು ಮಡಿಯಿಂದ ಮತ್ತೆ ನೈವೇದ್ಯವನ್ನು (ಅನ್ನವನ್ನು) ಮಾಡಿಕೊಂಡು ಬಂದು ತಪ್ಪಾಯಿತೆಂದು ಬಾಗಿಲಿನ ಹೊರಗಡೆ ಕರ್ಪೂರ ಹಚ್ಚಿ ಕ್ಷಮೆಯಾಚಿಸಿ ಬಾಗಿಲು ತೆರೆದರೇ ಸರ್ಪ ಹೊರಟು ಹೋಗುತ್ತದೆ.

ಒಂದು ಸತ್ಯ ಘಟನೆ:


1986 ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಯುತ್ತಿದ್ದಾಗ ನಡೆದ ಘಟನೆಯನ್ನು ನೋಡಿದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವರೇ ತನ್ನ ಸೇವಾಕಾರ್ಯಗಳನ್ನು ಭಕ್ತರಿಂದ ಮಾಡಿಸಿಕೊಳ್ಳುತ್ತಿರುತ್ತಾನೆಂದು ಹೇಳಬಹುದು. ಅದು ಹೇಗೆಂದರೆ ಸಿದ್ದಪ್ಪನಪಾಳ್ಯದ ಭಕ್ತ ಶ್ರೀ ಗುರುಬಸಪ್ಪನವರು ತಮ್ಮ ಸ್ವಇಚ್ಛೆಯಿಂದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಮಾಡಿಸುತ್ತಿದ್ದರು. ಇವರಿಗೆ ಕರಡಗೆರೆಯ ಶ್ರೀ ಎಸ್.ವಿ. ಶಂಕರಪ್ಪನವರು (ವ್ಯವಸಾಯ ಇಲಾಖೆಯ ನಿವೃತ್ತ ಅಸಿಸ್ಟೆಂಟ್ ಡೈರೆಕ್ಟರ್) ಸಹಕಾರ ಹಾಗೂ ಸಹಾಯ ನೀಡುತ್ತಿದ್ದರು. ಒಂದು ಸಾರಿ ಶ್ರೀ ಗುರುಬಸಪ್ಪನವರಿಗೂ ಅರೆಯೂರಿನ ಗ್ರಾಮಸ್ಥರಿಗೂ ಭಿನ್ನಾಭಿಪ್ರಾಯಗಳು ಬಂದು ಶ್ರೀ ಗುರುಬಸಪ್ಪನವರು ತಾನು ಮಾಡಿಸುತ್ತಿದ್ದ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ತಾನು ನಾಳೆಯಿಂದ ಕೆಲಸವನ್ನು ಮಾಡಿಸುವುದಕ್ಕೆ ದೇವಸ್ಥಾನಕ್ಕೆ ಬರುವುದಿಲ್ಲವೆಂದು ಹೇಳಿ ಹೊರಟುಹೋದರು.

ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಪೂಜೆ ಮಾಡುವುದಕ್ಕೆ ಬಂದು ನೋಡಿದಾಗ ಒಂದು ಸರ್ಪವು ದೇವಸ್ಥಾನದ ಬಾಗಿಲಿಗೆ ಅಡ್ಡಲಾಗಿ ತೆಕ್ಕೆ ಹಾಕಿಕೊಂಡು ಮಲಗಿದೆ. ಅರ್ಚಕರು ಊರಿನವರಿಗೆ ಈ ವಿಚಾರವನ್ನು ತಿಳಿಸಲಾಗಿ ಊರಿನವರು ಸಹ ಬಂದು ನೋಡಿದರು. ಗಲಾಟೆ ಮಾಡಿದರೂ ಸಹ ಸರ್ಪವು ಹೋಗುವ ಲಕ್ಷಣಗಳು ಕಾಣಲಿಲ್ಲವಾದ್ದರಿಂದ ಕೆಲವರು ಒಂದು ಹಿತ್ತಾಳೆ ಬೋಗಣಿಯಲ್ಲಿ ಹಾಲನ್ನು ತಂದಿಟ್ಟರು ಸರ್ಪವು ಹೆಡೆ ಎತ್ತಿ ನೋಡಿ ಹಾಲನ್ನು ಕುಡಿದು ಹಾಗೆಯೇ ಮಲಗಿತು. ಹೀಗೆ ಮೂರು ದಿವಸ ಸರ್ಪವು ಮುಷ್ಕರ ಮಾಡಿದಂತೆ ಮಲಗಿರುವುದನ್ನು ನೋಡಿದ ಶ್ರೀ ಗುರುಬಸಪ್ಪನವರು ತಾನು ಜೀರ್ಣೋದ್ಧಾರ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೋದುದರಿಂದ ಸರ್ಪವು ಈ ರೀತಿ ಬಂದು ಮಲಗಿರಬಹುದೆಂದು ಯೋಚಿಸಿ, ದೇವರಿಗೆ ಪೂಜೆ ಮಾಡಿಸಿ, ಕೆಲಸವನ್ನು ಪೂರ್ಣಗೊಳಿಸುತ್ತೇನೆಂದು ಮಂಗಳಾರತಿಯನ್ನು ತೆಗೆದುಕೊಂಡ ತಕ್ಷಣ ಸರ್ಪವು ಚಲಿಸಿದಂತೆ ಕಾಣಿಸಿತು. ಆದರೆ ನೂರಾರು ಜನರು ನೋಡುತ್ತಿದ್ದರೂ ಸಹ ಯಾರೊಬ್ಬರ ಕಣ್ಣಿಗೂ ಕಾಣಿಸದಂತೆ ಮಾಯವಾಯಿತು.

 

  

Related Posts

ಹೂವಿನ ಪ್ರಸಾದ

 ದೇವರ ಹೂವಿನ ಪ್ರಸಾದದಿಂದ ಭಕ್ತರು ಫಲಾಫಲಗಳನ್ನು ತಿಳಿಯುವ ವಿಧಾನ.   ಭಕ್ತರು ಇಲ್ಲಿಗೆ ಬಂದು ದೇವರಿಗೆ…

ಸ್ಥಳ ಪುರಾವೆಗಳು

ಋಷಿಮುನಿಗಳು ಇಲ್ಲಿ ಆಶ್ರಮ ಮಾಡಿಕೊಂಡುತಪಸ್ಸು ಮಾಡುತ್ತಿದ್ದಾರೆಂದು ಪುರಾವೆ.1986ನೇ ಇಸವಿಯಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ…

ಮುಖಪುಟ

ಮಾರಕ ರೋಗಗಳಾದ ಕ್ಯಾನ್ಸರ್ ಖಾಯಿಲೆ, ಹೃದಯ ರೋಗಗಳು ಮತ್ತು ಕಿಡ್ನಿ ವೈಪಲ್ಯದ ಖಾಯಿಲೆಗಳನ್ನು…