ಉದ್ಭವ ಲಿಂಗ ಇರುವ ಶ್ರೀ ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನ
ಶ್ರೀ ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಕೆರೆಯ ಏರಿಯ ಆಳದಲ್ಲಿ ಶ್ರೀ ಹಾಲು ಮಲ್ಲೇಶ್ವರಸ್ವಾಮಿಯ ಒಂದು ಚಿಕ್ಕದಾದ ದೇವಸ್ಥಾನವಿದೆ. ಇಲ್ಲಿರುವುದು ಮನುಷ್ಯರು ಪ್ರತಿಷ್ಟಾಪಿಸಿದ ಲಿಂಗವಲ್ಲ. ಭೂಮಿಯಲ್ಲೇ ಹುಟ್ಟಿದ ಲಿಂಗು. ಈ ಸ್ಥಳದ ಪವಾಡವೇನೆಂದರೆ: ಪೂರ್ವಕಾಲದಲ್ಲಿ ಇದು ಅರಣ್ಯ ಪ್ರದೇಶವಾಗಿದ್ದು ಹಾಲು ಮಲ್ಲೇಶ್ವರಸ್ವಾಮಿ ದೇವಸ್ಥಾನವಿರುವ ಜಾಗದಲ್ಲಿ ಒಂದು ಹುತ್ತವಿತ್ತು. ಅರಣ್ಯದ ಪಕ್ಕದಲ್ಲಿದ್ದ ಮಲ್ಲಪ್ಪನ ಹಳ್ಳಿಯ ರೈತರ ದನಗಳು ಮೇಯಲು ಅರಣ್ಯಕ್ಕೆ ಹೋಗುತ್ತಿದ್ದವು. ಹೀಗೆ ಮೇಯಲು ಹೋಗುತ್ತಿದ್ದ ದನಗಳ ಪೈಕಿ ಹಸುವೊಂದು ಬಂದು ಕೆರೆಯ ಏರಿಯಲ್ಲಿನ ಹುತ್ತದ ಮೇಲೆ ನಿಂತುಕೊಂಡು ಕೆಚ್ಚಲಿನಿಂದ ಹಾಲು ಧಾರಾಕಾರವಾಗಿ ಸುರಿಸುತ್ತಿತ್ತು. ಜನರೆಲ್ಲಾ ಈ ಅದ್ಭುತವನ್ನು ನೋಡಿ ಹುತ್ತವಿದ್ದ ಈ ಸ್ಥಳವನ್ನು ಅಗೆದು ಪರೀಕ್ಷಿಸಿದಾಗ ಅಲ್ಲಿ ಒಂದು ಸಣ್ಣದಾದ ೫-೬ ಅಂಗುಲ ಎತ್ತರದ ಉದ್ಭವ ಲಿಂಗ ಗೋಚರಿಸಿತು. ಆಗ ಜನರೆಲ್ಲಾ ಸೇರಿ ಅಲ್ಲೇ ಒಂದು ಚಿಕ್ಕದಾದ ದೇವಸ್ಥಾನ ಕಟ್ಟಿಸಿದರು. ಇದೇ ಮುಂದೆ ಶ್ರೀ ಹಾಲುಮಲ್ಲೇಶ್ವರಸ್ವಾಮಿಯೆಂದು ಪ್ರಸಿದ್ದಿಯಾಯಿತು. |