ಆಧುನಿಕ ವೈದ್ಯಪದ್ಧತಿಗೆ, ವಿಜ್ಞಾನಕ್ಕೆ ಸವಾಲಾದ ಕೆಲವು ಪವಾಡ ಸದೃಶ್ಯ ಘಟನೆಗಳು

ಆಧುನಿಕ ವೈದ್ಯಪದ್ಧತಿಗೆ, ವಿಜ್ಞಾನಕ್ಕೆ ಸವಾಲಾದ ಕೆಲವು ಪವಾಡ ಸದೃಶ್ಯ ಘಟನೆಗಳು

ಕ್ಯಾನ್ಸರ್‌ನಂಥ ಮಾರಕ ಖಾಯಿಲೆಗಳು ಯಾವುದೇ ವಿಧವಾದ ಔಷಧೋಪಚಾರ ಅಥವಾ ಶಸ್ತ್ರಚಿಕಿತ್ಸೆ ಇಲ್ಲದೆಯೇ ವಾಸಿಯಾಗಿ ಆಧುನಿಕ ವೈದ್ಯಪದ್ಧತಿಗೆ, ವಿಜ್ಞಾನಕ್ಕೆ ಸವಾಲಾದ ವಿಷಯವನ್ನು ಕೇಳಿ ನಂಬುವುದು ಕಷ್ಟವಾದರೂ ಸಹ ಇದು ಸತ್ಯ. ಇದಕ್ಕೆ ನಿದರ್ಶನವಾಗಿ ನಡೆದ ಕೆಲವು ಪವಾಡ ಸದೃಶ್ಯ ಘಟನೆಗಳನ್ನು ಇಲ್ಲಿ ವಿವರಿಸಲಾಗಿವೆ.

ಅರೆಯೂರಿನ ಶ್ರೀ ಕುದರಪ್ಪನಿಗೆ 2001 ನೇ ಇಸವಿಯಲ್ಲಿ ಕುತ್ತಿಗೆಯ ಹಿಂಭಾಗದಲ್ಲಿ ಒಂದು ಬಾವು ಆಗಿ ಅದು ದೊಡ್ಡದಾಯಿತು. ಹೀಗೆ ಗಾಯವು ದೊಡ್ಡದಾಗಿ ತೀವ್ರ ನೋವು ಕೊಡುತ್ತಿದ್ದರೂ ಸಹ ಇವರು ಆಸ್ಪತ್ರೆಗೆ ಹೋಗಿ ಶುಶ್ರೂಷೆಯಾಗಲಿ, ಬೇರಾವುದೇ ಶಸ್ತ್ರಚಿಕಿತ್ಸೆಯಾಗಲಿ ಮಾಡಿಸಿಕೊಳ್ಳದೇ ಪ್ರತಿ ದಿವಸ ದೇವರ ಪೂಜೆಯಾಗುವ ಸಮಯಕ್ಕೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರ ತೀರ್ಥವನ್ನು ತೆಗೆದುಕೊಂಡು ಗಾಯಕ್ಕೆ ಸವರುವುದು ಮತ್ತು ದೇವಸ್ಥಾನದ ಸುತ್ತ ಭಕ್ತಿಯಿಂದ ಪ್ರದಕ್ಷಿಣೆ ಹಾಕುವುದು ಮಾಡಿದರು. ಈ ರೀತಿ ಸತತವಾಗಿ 3 ತಿಂಗಳುಗಳ ಕಾಲ ಮಾಡಿದ್ದರಿಂದ ಇವರ ಗಾಯ ವಾಸಿಯಾಯಿತು.

ಸಿದ್ದಪ್ಪನ ಪಾಳ್ಯದ ಶ್ರೀ ಮಲ್ಲನರಸಯ್ಯ ಮತ್ತು ಶ್ರೀ ಎಲ್ಲಯ್ಯ ಇವರಿಬ್ಬರಿಗೂ 2002ನೇ ಇಸವಿಯಲ್ಲಿ (1 ತಿಂಗಳು ಹೆಚ್ಚು ಕಮ್ಮಿಯಾಗಿ) ಗಂಟಲಿನ ಕ್ಯಾನ್ಸರ್ ಕಾಯಿಲೆಯಾಗಿ ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿ ಸುಮಾರು 6 ತಿಂಗಳು ಚಿಕಿತ್ಸೆ ಪಡೆದರೂ ಸಹ ಗುಣವಾಗಲಿಲ್ಲ. ಆ ಕ್ಯಾನ್ಸರ್ ಹುಣ್ಣು ಕ್ರಮೇಣ ಗಟ್ಟಿಗೊಂಡು ಗಂಟಲಲ್ಲಿ ನೀರು ಸಹಾ ಇಳಿಯುವುದು ಕಷ್ಟವಾದ್ದರಿಂದ ಆಸ್ಪತ್ರೆಯ ಡಾಕ್ಟರ್ ಇವರನ್ನು ಡಿಸ್ಚಾರ್ಜ್ ಮಾಡಿ “ಇನ್ನೊಂದು ತಿಂಗಳವರೆಗೆ ಮಾತ್ರ ಬದುಕಿರುತ್ತೀರಿ. ಆದ್ದರಿಂದ ನೀವು ಮನೆಯಲ್ಲೇ ನೆಮ್ಮದಿಯಿಂದ ಕೊನೆಯುಸಿರೆಳೆಯುವುದು ಸೂಕ್ತ” ಎಂದು ಹೇಳಿ ಕಳುಹಿಸಿದರು. ಆಗ ಇವರು ಶ್ರೀ ವೈದ್ಯನಾಥೇಶ್ವರಸ್ವಾಮಿಗೆ ದೃಢನಂಬಿಕೆಯಿಂದ ಮೊರೆ ಹೋಗಿ – “ನಾವುಗಳು ನಮ್ಮ ಜೀವನ ಪರ್ಯಂತ ಪ್ರತಿ ವರ್ಷ ನಿನ್ನ ಸನ್ನಿಧಿಗೆ ಬಂದು ನನ್ನ ಕೈಲಾದ ಸೇವೆಯನ್ನು ಮಾಡುತ್ತೇವೆ. ನಮ್ಮ ಖಾಯಿಲೆಯನ್ನು ವಾಸಿ ಮಾಡು” ಎಂದು ಹರಸಿಕೊಂಡು ಅರ್ಚನೆ ಮಾಡಿಸಿ ಪ್ರಾರ್ಥಿಸಿಕೊಂಡರು. ಪವಾಡಸದೃಶವಾಗಿ ಇವರ ಕ್ಯಾನ್ಸರ್ ಹುಣ್ಣುಗಳು ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ವಾಸಿಯಾಗುತ್ತಾ 3 ತಿಂಗಳಲ್ಲಿ ಸಂಪೂರ್ಣವಾಗಿ ಗುಣಮುಖರಾದರು.